എസ് .ഡി. പി. എച്ച്. എസ്. ധർമ്മത്തടുക്ക/കുഞ്ഞെഴുത്തുകൾ/ ಕಾಡಿನ ಯುದ್ಥ
ಕಾಡಿನ ಯುದ್ಧ
ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಒಂದು ಸಿಂಹ ನೀರು ಕುಡಿಯಲು ಕೊಳಕ್ಕೆ ಹೋಗಿತ್ತು. ಅದೇ ವೇಳೆಗೆ ಒಂದು ಕಾಡು ಹಂದಿ ಕೂಡ ಅಲ್ಲಿಗೆ ನೀರು ಕುಡಿಯಲು ಬಂತು. ನಾನು ಕಾಡಿನ ರಾಜ. ಮೊದಲು ನಾನೇ ನೀರು ಕುಡಿಯುತ್ತೇನೆ ಎಂದು ಸಿಂಹ ಗರ್ಜಿಸಿತು.ಮೊದಲು ಬಂದದ್ದು ನಾನು. ನಾನು ನೀರು ಕುಡಿದ ಬಳಿಕ ನೀನು ಬಾ ಎಂದು ಕಾಡುಹಂದಿ ಎದುರಾಡಿತು. ಎರಡೂ ಪ್ರಾಣಿಗಳು ಕೊಳದ ಬದಿಯಲ್ಲೇ ಜಗಳಾಡಿದವು. ಒಂದರ ಮೇಲೊಂದು ನುಗ್ಗಿ , ಪರಚಿ , ಇರಿದು ಹೊಡೆದಾಡಿಕೊಂಡವು. ಬಹಳ ಹೊತ್ತಿನವರೆಗೆ ಕಾದಾಟ ನಡೆಯಿತು. ಎರಡೂ ಪ್ರಾಣಿಗಳಿಗೆ ಬಲವಾದ ಏಟು ಬಿತ್ತು. ಕೊನೆಗೆ ಎರಡಕ್ಕೂ ಸುಸ್ತಾಯಿತು. ಅವು ದಣಿವಾರಿಸಿಕೊಳ್ಳಲೆಂದು ಒಂದು ಕ್ಷಣ ಹಿಮ್ಮೆಟ್ಟಿದವು. ಆಗಲೇ ಅವುಗಳಿಗೆ ತಿರುಗುವ ನೆರಳುಗಳು ಕಾಣಿಸಿದವು. ಅವೆರಡೂ ತಲೆ ಮೇಲೆತ್ತಿ ನೋಡಿದವು.ಮೇಲೆ ಸುತ್ತು ಹೊಡೆಯುತ್ತಿದ್ದ ರಣಹದ್ದುಗಳು ಕಾಣಿಸಿದವು. ರಣಹದ್ದುಗಳು ತಮ್ಮ ಸಾವನ್ನೇ ಕಾಯುತ್ತಿವೆ ಎಂದು ಸಿಂಹ ಮತ್ತು ಕಾಡುಹಂದಿಗೆ ತಿಳಿಯಿತು. ನಾವು ಹೊಡೆದಾಡಿ ಹದ್ದುಗಳಿಗೆ ಆಹಾರವಾಗುವ ಬದಲು ಶಾಂತಿಯಿಂದ ನೀರು ಕುಡಿದು ಹೋಗುವುದು ಲೇಸು ಎಂದು ಅವು ಆಲೋಚಿಸಿದವು.ಎರಡೂ ಜತೆಯಾಗಿ ನೀರು ಕುಡಿದು ಶಾಂತಿಯಿಂದ ಹೊರಟು ಹೋದವು. ಇದೊಂದು ನೀತಿ ಕಥೆಯಾಗಿ ಕಂಡರೂ ನಮ್ಮ ಜೀವನದಲ್ಲಿಯೂ ಹೀಗೆಯೇ ನಾವು ಪರಸ್ಪರ ದ್ವೇಷ ಅಸೂಯೆಗಳಿಂದ ಹೊಡೆದಾಡಿಕೊಂಡಿದ್ದರೆ ನಮ್ಮ ಅವನತಿಯನ್ನೇ ಬಯಸುವ ಹಲವಾರು ಜನರು ನಮ್ಮ ನಡುವೆಯೇ ಇರಬಹುದು ಆದ್ದರಿಂದ ದ್ವೇಷ ಅಸೂಯೆಗಳನ್ನು ಬಿಟ್ಟು ಸಹಬಾಳ್ವೆಯಿಂದ ಕಷ್ಟದಲ್ಲಿರುವವರಿಗೆ ಸಹಾಯಮಾಡುತ್ತಾ ಉತ್ತಮ ಪ್ರಜೆಗಳಾಗಿ ಬದುಕುವ.
|