ജി.എച്ച്.എസ്. മൂഡംബൈൽ/എന്റെ വിദ്യാലയം
ಮತ್ತೆ ಮೂಡಂಬೈಲ್ ಗೆ ..
ಮೂಡಂಬೈಲ್ ಎಂಬ ಊರು ಇಷ್ಟು ಪ್ರಸಿದ್ಧಿ ಹೊಂದಲು ಇಲ್ಲಿನ ವಿಧ್ಯಾಸಂಸ್ಥೆ ಎಂದರೆ ತಪ್ಪಾಗಲಾರದು. ಜನ ಸಾಮಾನ್ಯರ ಮಕ್ಕಳಿಗೆ ದೂರದೂರಿಗೆ ತೆರಳಿ ವಿದ್ಯಾರ್ಜನೆ ಮಾಡಲು ಕಷ್ಟವಾಗುತ್ತಿದ್ದ ಆ ಕಾಲದಲ್ಲಿ ಅಂದರೆ 1924 ರಲ್ಲಿ ಉಳಿಯ ಪದಕಣ್ಣಾಯರವರಿಂದ ರಚಿಸಲ್ಪಟ್ಟ ಕಟ್ಟಡದಲ್ಲಿ ದಿವಂಗತ ಶ್ರೀ ಎಂ. ನಾರ್ಣಪ್ಪಯ್ಯನವರಿಂದ ಮೂಡಂಬೈಲು ಶಾಲೆ ಆರಂಭಿಸಲ್ಪಟ್ಟಿತ್ತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿನ ಮದರಾಸು ಸರಕಾರಕ್ಕೆ ಸೇರಿದ ಈ ಪ್ರಾಂತ್ಯದಲ್ಲಿ ಮೂಡಂಬೈಲ್ ನಲ್ಲಿ ಐದನೇ ತರಗತಿಯ ವರೆಗೆ ಕಲಿಯಲು ಅವಕಾಶವಿತ್ತು. ಅಂದರೆ ಮೊದಲು ಎಲ್ಪಿ (L P) ಶಾಲೆಯೆಂದರೆ ಐದನೇ ತರಗತಿಯ ವರೆಗೆ ಇರುವ ವಿದ್ಯಾಭ್ಯಾಸ .. ಇದನ್ನು ಎಲಿಮೆಂಟರಿ ಶಾಲೆ ಎನ್ನುತ್ತಿದ್ದರು. ಸ್ವಾತಂತ್ರ್ಯಾ ನಂತರ ಈ ಪ್ರಾಂತ್ಯ ಕೇರಳ ಸರಕಾರದ ತೆಕ್ಕೆಗೆ ಬಿದ್ದಾಗ ಶಾಲೆಯ ತರಗತಿ ನಾಲ್ಕನೇ ಕ್ಲಾಸಿನ ವರೆಗೆ ಸೀಮಿತವಾಯಿತು. ಈ ಊರಿನಲ್ಲಿ ಇನ್ನೊಂದು ಶಾಲೆಯೂ ಇತ್ತು ಎಂಬುದರ ಬಗ್ಗೆ ಇಂದಿನ ತಲೆಮಾರಿನವರಿಗೆ ತಿಳಿದಿರಲಾರದು. ಅದ್ಯಾವುದೆಂದರೆ ಮಜಿಬೈಲು ಶಾಲೆ. ಈ ಮಜಿಬೈಲು ಶಾಲೆ ಮೊದಲು ಎಲ್ಲಿತ್ತು ಗೊತ್ತೇ ...? ಬಲ್ಲಂಗುಡೇಲು ಶ್ರೀ ಭಗವತೀ ಕ್ಷೇತ್ರದ ಪಕ್ಕ ... ಅಂದರೆ ಕೇವಲ ಅರ್ಧ ಮೈಲಿಗಿಂತಲೂ ಕಡಿಮೆ ಅಂತರ . ಈ ಪ್ರದೇಶ ಸ್ವಾತಂತ್ರ್ಯ ಪೂರ್ವದಲ್ಲೇ ಶ್ರೀಮಂತವಾಗಿತ್ತು ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು. ಈ ಬಲ್ಲಂಗುಡೇಲು ಎಂಬುದು ನನ್ನ ತಂದೆಯವರ ತರವಾಡು ... ಈ ತರವಾಡು ಮನೆಯ ಉತ್ತರಕ್ಕಿರುವ ಮೇಲಿನ ಗುಡ್ಡೆ ಪ್ರದೇಶದಲ್ಲಿ ಮುಳಿ (ಹುಲ್ಲು) ಹಾಸಿದ ಕಟ್ಟಡವೊಂದಿತ್ತು. ಸುಮಾರು 1935ರ ಕಾಲದಲ್ಲಿ ನಮ್ಮ ಆ ತರವಾಡು ಮನೆಗೆ ಅಂದಿನ ಮದರಾಸು/ಬ್ರಿಟಿಷ್ ಸರಕಾರದಿಂದ ಕಟ್ಟಡದ ಬಾಡಿಗೆಯಾಗಿ ತಿಂಗಳಿಗೆ 32 ಆಣೆ ಅಂದರೆ ಎರಡು ರೂಪಾಯಿಗಳು ಸಂದಾಯವಾಗುತ್ತಿತ್ತು . ಈ ಮಜಿಬೈಲು ಶಾಲೆಯ ಮೊದಲ ಅಧ್ಯಾಪಕರಾಗಿದ್ದವರು ಸೇಸಪ್ಪ ಮಾಸ್ಟರ್ ಮತ್ತು ದೂಮ ಮಾಸ್ಟರ್ ... ಇವರಿಬ್ಬರ ಬಗ್ಗೆ ನಾನು ಮಾಹಿತಿ ಸಂಗ್ರಹಿಸಲು ಹೆಣಗಾಡಿದರೂ ಪ್ರಯೋಜನವಾಗಲಿಲ್ಲ ... ಅಂದಿನ ದಿನಗಳ ಹಳೆಯ ತಲೆಮಾರಿನ ಒಬ್ಬರೂ ಇಂದು ಜೀವಿಸಿಲ್ಲ .. ಈ ಮಜಿಬೈಲು ಶಾಲೆ ಶಿಥಿಲಾವಸ್ಥೆಗೆ ತಲುಪಿದಾಗ ಇದನ್ನು ಮೂಡಂಬೈಲು ಶಾಲೆಯೊಂದಿಗೆ ವಿಲೀನ ಮಾಡಲಾಯಿತು. ಪಾಳು ಬಿದ್ದಿದ್ದ ಈ ಕಟ್ಟಡವನ್ನು ನವೀಕರಿಸಿ ಪಟ್ಟತ್ತ ಮುಗೇರು ಮಸೀದಿಯ ಮದ್ರಸಾ ವಿಧ್ಯಾಭಾಸಕ್ಕಾಗಿ ಮುಂದಿನ ದಿನಗಳಲ್ಲಿ ಬಳಸಲಾಗಿತ್ತು. (ಈ ಪಟ್ಟತ್ತ ಮುಗೇರು .. ಪಡತ್ತೂರು .. ಎಂದು ಕರೆಯಲ್ಪಡುವ ಪ್ರದೇಶವೂ ಒಂದು ಇತಿಹಾಸವಿರುವ ಊರು ... ಇಲ್ಲಿನ ಬಗ್ಗೆ/ ಈ ಊರಿಗೆ ಈ ಹೆಸರು ಬರಲು ಕಾರಣದ ಬಗ್ಗೆ ಇನ್ನೊಮ್ಮೆ ಕೂಲಂಕುಷವಾಗಿ ಬರೆಯುತ್ತೇನೆ) .... ವರುಷಗಳುರುಳಿದುವು .. ಸುಮಾರು ಮೂರು ಮೈಲು ದೂರದಲ್ಲಿ ಮಜಿಬೈಲು ಶಾಲೆಯ ಹೊಸ ಕಟ್ಟಡವೂ ಆರಂಭಗೊಂಡಿತು .. ಮೊದಲು ಇದು ಮುಳಿ(ಹುಲ್ಲು) ಹಾಸಿದ ಕಟ್ಟಡ .. ಈ ಮಜಿಬೈಲು ಶಾಲೆ (ಮುಳಿ ಹಾಸಿದ ಶಾಲೆ) ಸುಮಾರು 1985 ಸಮಯದಲ್ಲಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು .. ನಂತರ ಹೊಸಕಟ್ಟಡ ನಿರ್ಮಾಣವಾಯಿತು .. ಇದು ಒಂದು ಇತಿಹಾಸ. ಮೂಡಂಬೈಲು ಶಾಲೆ ಸುಮಾರು 1982-83 ರ ಸಮಯದಲ್ಲಿ ಯು ಪಿ ಶಾಲೆ (ಏಳನೇ ತರಗತಿ) ವರೆಗೆ ವಿಸ್ತಾರಗೊಂಡಿತು .. ಮೊದಲು ಇದ್ದ ಹಳೆಯ ಕಟ್ಟಡದಲ್ಲಿ ಒಂದರಿಂದ ನಾಲ್ಕನೇ ತರಗತಿ ಮಾತ್ರ. ಐದನೇ ತರಗತಿ ಪಕ್ಕದ ರಸ್ತೆಯ ಹತ್ತಿರದಲ್ಲಿ ನಿರ್ಮಾಣ ಗೊಂಡಿತು. ಕೊನೆಗೆ ಹಳೆಯ ಕಟ್ಟಡವನ್ನು ಸಂಪೂರ್ಣವಾಗಿ ತೊರೆದು ಒಂದರಿಂದ ಏಳನೇ ತರಗತಿಯವರೆಗೆ ರಸ್ತೆ ಬದಿಯ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಅಂದ ಹಾಗೆ ನಾನು ಓದಿದ್ದು ಆ ಹಳೆಯ ಕಟ್ಟಡದಲ್ಲಿ ... ಒಂದನೇ ಹಾಗೂ ಎರಡನೇ ತರಗತಿಯ ಛಾವಣಿ ಹಂಚಿನದ್ದು .. ಮೂರು ಹಾಗೂ ನಾಲ್ಕನೇ ತರಗತಿ ಹುಲ್ಲು ಹಾಸಿದ ಛಾವಣಿ .. :) ಒಂದನೇ ಕ್ಲಾಸಿನ ಅಧ್ಯಾಪಕರಾಗಿದ್ದ (ಮುಖ್ಯೋಪಾಧ್ಯಾಯರೂ ಹೌದು) ಕಲ್ಯಾಣತ್ತಾಯ ಮಾಸ್ಟ್ರು .. ಎರಡನೇ ತರಗತಿಗೆ ಶಂಕರ ಮಾಷ್ಟ್ರು .. ಮೂರನೇ ತರಗತಿಗೆ ಶಾಂತ ಮಾಷ್ಟ್ರು .. ನಾಲ್ಕನೇ ತರಗತಿಗೆ ಕಿಟ್ಟು ಮಾಷ್ಟ್ರು .. :) ಇದು ನನ್ನ ಶಾಲಾ ದಿನಗಳ ಒಂದು ಮೆಲುಕು. ಆ ದಿನಗಳು ಇಂದಿಗೂ ಕಣ್ಣ ಮುಂದಿದೆ ... ಮೂಡಂಬೈಲ್ LP ಶಾಲೆ ಹೀಗೆ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಇಂದು ಹೈಸ್ಕೂಲು ಮಟ್ಟಕ್ಕೆ ತಲುಪಿದೆ .. ಈ ಶಾಲೆ ಇಷ್ಟೊಂದು ಎತ್ತರಕ್ಕೆ ತಲುಪಲು ಇಲ್ಲಿನ ಊರ ಮಹನೀಯರ ಕಾಳಜಿಯೂ ಪ್ರಮುಖ ಕಾರಣ .. ಹಿಂದಿನ ತಲೆಮಾರಿನ ಅಧ್ಯಾಪಕರಾಗಿದ್ದ ... ಶ್ರೀ ನಾರ್ಣಪ್ಪಯ್ಯ (ಸಂಸ್ಥಾಪಕರು - ವಿದ್ಯಾವರ್ಧಕ UP ಶಾಲೆ ಮೀಯಪದವು), ಶ್ರೀ ಕುಣ್ಚ್ /ಕುಂಜ, ಶ್ರೀ ರಾಮಕೃಷ್ಣ ರಾವ್, ಶ್ರೀ ಪೊಕ್ಕ (ಮೊಗ್ರಾಲ್ ಪುತ್ತೂರಿನವರು), ಶ್ರೀ ಮಾಂಕು (ಶಂಕರ ಮಾಸ್ಟರ್ ಅವರ ಅಪ್ಪ),ಶ್ರೀ ಅಬ್ಬಾಸ್(ನನ್ನ ದೊಡ್ಡಪ್ಪ) , ಶ್ರೀ ರಾಮಪ್ಪ (ನಿವೃತ್ತ ಶಾಸಕ)... ಮೊದಲಾದ ಹಿರಿಯ ಅಧ್ಯಾಪಕರನ್ನು ಈ ಸಂಧರ್ಭದಲ್ಲಿ ಸ್ಮರಿಸಲೇ ಬೇಕು. (ಇಂದು ಇವರಾರೂ ಜೀವಿಸಿಲ್ಲ). ಹೊಸ ಕಟ್ಟಡ, ಸ್ಥಳದಾನ ಹಾಗೂ ಇನ್ನಿತರ ಆವಶ್ಯಕತೆಗಳಿಗೆ ತಕ್ಷಣ ಸ್ಪಂದಿಸುತ್ತಿರುವ ಶಾಲೆಯ ಪಕ್ಕ ಮನೆಯಿರುವ ಶ್ರೀ ಶಿವರಾಮ ಪದಕಣ್ಣಾಯ ಮಾಸ್ಟರ್ ಅವರ ಕೊಡುಗೆಯೂ ಅಮೂಲ್ಯ .. ಇವರು ಮೊದಲು ಮೀಯಪದವಿನಲ್ಲಿ ಅಧ್ಯಾಪಕರಾಗಿದ್ದವರು .. ನನಗೂ ಇವರು ಅಧ್ಯಾಪಕರಾಗಿದ್ದವರು ಎಂಬುವುದೂ ನನಗೆ ಹೆಮ್ಮೆ ಪಡುವ ವಿಷಯ. ಶ್ರೀ ಶಿವರಾಮ ಪದಕಣ್ಣಾಯ ಅವರ ಸಹೋದರ ಶ್ರೀ Chandrashekara Padakannaya ( DRDO Scientist - Retired ) ಅವರು ಕಟ್ಟಡ ಹಾಗೂ ಮೈದಾನಕ್ಕೆ ಬೇಕಾಗಿ ಒಂದು ಎಕರೆ ಜಮೀನು ಸ್ಥಳದಾನ ಮಾಡಿ ಕೊಟ್ಟಿದುದರಿಂದ ಇಂದು ಇಲ್ಲಿ ವಿಶಾಲ ಸ್ಥಳದಲ್ಲಿ ಹೈಸ್ಕೂಲು ಕಟ್ಟಡ ತಲೆಯೆತ್ತಲು ಸಾಧ್ಯವಾಯಿತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಶಾಲಾವತಿಯಿಂದ ಅವರನ್ನು ಸನ್ಮಾನಿಸಲಾಗಿತ್ತು. ಈ ಪ್ರದೇಶ ಇನ್ನೂ ಬೆಳೆಯಲಿ .. ಬೆಳೆದು ಇನ್ನೂ ಎತ್ತರಕ್ಕೇರಲಿ .. ಎಂಬುದೇ ನನ್ನ ಹಾರೈಕೆ.
ಕೆ. ಎ. ಎಂ. ಅನ್ಸಾರಿ ಮೂಡಂಬೈಲ್