Schoolwiki സംരംഭത്തിൽ നിന്ന്
ರಮಣೀಯವಾದ ಪ್ರಕೃತಿಯ ಮಡಿಲಲ್ಲಿ ಶೋಭಿಸುವ ಪುಟ್ಟ ಶಾಲೆಗೆ ಶತಮಾನದ ಸಂಭ್ರಮ. ಈ ಶಾಲೆಯು ವರ್ಕಾಡಿ ಗ್ರಾಮದ ಕಾಪಿರಿ ಎಂಬ ಸ್ಥಳದಲ್ಲಿ 1920ರಲ್ಲಿ ದಿವಂಗತ ಬಂಟಪ್ಪನಾಯ್ಕರಿಂದ ಸ್ಥಾಪಿತಗೊಂಡಿತು. ಆ ಕಾಲದಲ್ಲಿ ಕೊಣಿಲ ಶಂಕರ ಬಟ್ಟರು ಅಧ್ಯಾಪಕರಾಗಿದ್ದರು. 1922ರಲ್ಲಿ ಈ ಶಾಲೆಗೆ ವಿದ್ಯಾ ಇಲಾಖೆಯಿಂದ ಮಾನ್ಯತೆ ಲಭಿಸಿತು. ಕೆಲಸಮಯದ ನಂತರ ಶ್ರೀ ಸೋಮಯ್ಯ ಪೂಜಾರಿ ಎಂಬವರು ಸ್ಥಾಪಕರಾದ ಬಂಟಪ್ಪ ನಾಯ್ಕರ ಅನುಮತಿ ಪಡೆದು ಈ ಶಾಲೆಯನ್ನು ತಂತ್ರಿ ಬೈಲಿಗೆ ಸ್ಥಳಾಂತರಿಸಿದರು. ಅಲ್ಲಿ ಒಂದು ಮುಳಿಹುಲ್ಲಿನ ಚಿಕ್ಕ ಮನೆಯನ್ನು ದುರಸ್ತಿಗೊಳಿಸಿ ಶಾಲೆಯು ನಡೆಯುತ್ತಲಿತ್ತು. ವರುಷಗಳು ಕಳೆದರೂ ಶಾಲೆಯು ಯಾವುದೇ ಅಭಿವೃದ್ಧಿಯನ್ನು ಕಾಣಲಿಲ್ಲ. 1939ರಲ್ಲಿ ಶ್ರೀ ನಾರಾಯಣ ನಾಯ್ಕರು ಮತ್ತು ಅಂದಿನ ಪ್ರಾದೇಶಿಕ ಗುರುಗಳಾದ ವಂದನೀಯ AP ಡಿ'ಸೋಜಾರವರು ಒಟ್ಟುಗೂಡಿ ಈ ಶಾಲೆಯನ್ನು ಕೆಥೋಲಿಕ್ ಶಿಕ್ಷಣ ಮಂಡಳಿಗೆ ಹಸ್ತಾಂತರಿಸಿದರು. ಶಾಲೆ ಇರುವ ಸ್ಥಳವು ಶರವು ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳ ಅಧೀನದಲ್ಲಿತ್ತು. ತಿಂಗಳಿಗೆ ಎಂಟಾಣೆಯನ್ನು ಗೇಣಿಗೆ ಕೊಡುವುದೆಂದು (ಕಟ್ಟಡವನ್ನು ಕಟ್ಟಲು ತೀರ್ಮಾನಿಸಿದಾಗ) ಕರಾರು ಆಗಿತ್ತೆಂದು ತಿಳಿದು ಬರುತ್ತದೆ. ಮುಂದೆ ಶ್ರೀ ಮಾರ್ಕು ಕುಟಿನ್ಹಾರವರು ಸ್ವಲ್ಪ ಸ್ಥಳವನ್ನು ಬಿಟ್ಟು ಕೊಟ್ಟರು. ಅನಂತರ ಈಗಿನ ಶಾಲಾ ಕಟ್ಟಡವು ನಿರ್ಮಾಣವಾಯಿತು. 1998 ಶಾಲೆಗಾಗಿ ಇನ್ನೊಂದು ಹೊಸ ಕಟ್ಟಡದ ಕೆಲಸವನ್ನು ವಂದನೀಯ ಪೀಟರ್ ಸೆರಾವೊ ಗುರುಗಳು ಆರಂಭಿಸಿದರು. ನಂತರ ವಂದನೀಯ ಅಪೋಲಿನಾರಿಸ್ ಕ್ರಾಸ್ತ್ ಗುರುಗಳು ಅದನ್ನು ಪೂರ್ಣಗೊಳಿಸಿದರು.
ಶಾಲಾ ಚರಿತ್ರೆಯಲ್ಲಿ ಮೊತ್ತ ಮೊದಲಿಗೆ 2004 ಫೆಬ್ರವರಿ ತಿಂಗಳಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಸೂರ್ಯಮೂರ್ತಿಯವರ ನೇತೃತ್ವದಲ್ಲಿ ಶಾಲಾ ವಾರ್ಷಿಕೋತ್ಸವ ಜರುಗಿತು. ಈಗ ಪ್ರತೀವರ್ಷವೂ ವಾರ್ಷಿಕೋತ್ಸವ ನಡೆಯುತ್ತಿದೆ.