എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2024-25

Schoolwiki സംരംഭത്തിൽ നിന്ന്

ಧರ್ಮತ್ತಡ್ಕದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರೀಕ್ಷೆ ತರಗತಿ :

ಗುರುಹಿರಿಯರು, ಹೆತ್ತವರ ಬಗ್ಗೆ ಸಮರ್ಪಣಾ ಭಾವ ತುಂಬಿರಬೇಕು - ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ : ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಮತ್ತು ಗುಂಪೆ ವಲಯದ ನೇತೃತ್ವದಲ್ಲಿ `ಪರೀಕ್ಷೆ ನಿರೀಕ್ಷೆ' ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಿವೃತ್ತ ಪ್ರಾಂಶುಪಾಲ ಯಸ್ ವಿಶ್ವೇಶ್ವರ ಭಟ್ ಉಂಡೆಮನೆ ಪರೀಕ್ಷೆಯ ತಯಾರಿಯ ಬಗ್ಗೆ ಮಕ್ಕಳಿಗೆ ಧೈರ್ಯ ತುಂಬಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತರಗತಿ ನಡೆಸಿಕೊಡುತ್ತಾ ಶಿಕ್ಷಣವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆ ಬದುಕನ್ನು ರೂಪಿಸುತ್ತದೆ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು ಎಂದರು. ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರ ನಲುವತ್ತು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಕಲ್ಲಕಟ್ಟ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಮುಳ್ಳೇರಿಯ ಹವ್ಯಕ ವಲಯದ ಪ್ರದಾನ ಶ್ಯಾಮಪ್ರಸಾದ ಕುಳಮರ್ವ ಶುಭನುಡಿಗಳನ್ನಡಿದರು. ಶಿಕ್ಷಕಿ ಉಮಾದೇವಿ ನಿರೂಪಿಸಿದರು. ಶಿಲ್ಪ ವಂದಿಸಿದರು. ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಮಕೃಷ್ಣ ಭಟ್, ಪ್ರದೀಪ, ಶಿವಪ್ರಸಾದ್ ಸಿ, ಸೂರ್ಯನಾರಾಯಣ ಭಟ್, ಪ್ರಶಾಂತ ಹೊಳ್ಳನೀರಾಳ ಹಾಗೂ ದಿನೇಶ್ ಕೆ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.


ವಿವಿಧ ಕ್ಲಬ್ ಗಳ ಉದ್ಘಾಟನೆ

ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯು ಜರಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಗೋವಿಂಧ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮ್ಯಾನೇಜರ್ ಶಂಕರ ನಾರಾಯಣ ಭಟ್ ಮಾತನಾಡಿ "ಕ್ಲಬ್ ಗಳು ಮಕ್ಕಳ ಸೃಜನಶೀಲತೆಯ ಅನಾವರಣಕ್ಕೆ ಪೂರಕ ವೇದಿಕೆಯಾಗಿದೆ,ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಶುಭವನ್ನು ಹಾರೈಸಿದರು. ಶಿಕ್ಷಕಿ ಸುನೀತಾ ಟೀಚರ್ ಶುಭನುಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಕರಾದ ಸೂರ್ಯನಾರಾಯಣ ಭಟ್ ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಕುಮಾರಿ ವೃಷ್ಠಿ ಯಸ್ ರೈ ಸ್ವಾಗತಿಸಿ, ಕುಮಾರಿ ಮನ್ನಿಪಾಡಿ ವೈಷ್ಣವಿ ವಂದಿಸಿದರು. ಕುಮಾರಿ ಅನನ್ಯ ಭಟ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.


ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024 - 25

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶಾರದಾ ಎಸ್ ಭಟ್ ಕಾಡಮನೆ ,ಯೋಗದ ಮಹತ್ವವನ್ನು ತಿಳಿಸಿದರು. "ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ರೋಗ ದೂರ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ" ಎಂದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್, ಶ್ರೀಮತಿ ಎನ್ ಗಂಗಮ್ಮ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವಪ್ರಸಾದ್ ಸಿ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ನಿರೂಪಿಸಿದರು, ಶಶಿಧರ ಕೆ ವಂದಿಸಿದರು. ನಂತರ ಯೋಗ ಶಿಕ್ಷಕಿ ಶ್ರೀಮತಿ ಶಾರದಾ ಕಾಡಮನೆ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.


ಕಾರ್ಗಿಲ್ ವಿಜಯೋತ್ಸವ

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. "ನಾವಿಂದು ನಮ್ಮ ಮನೆ ಮನಗಳಲ್ಲಿ ದೇಶ ಪ್ರೇಮ ಬೆಳೆಸಬೇಕು. ಕೇವಲ ಯೋಧರಾಗಿ ಮಾತ್ರ ದೇಶ ಸೇವೆ ಮಾಡುವುದಲ್ಲ ದೇಶದ ಪ್ರತಿಯೊಂದು ಸಂಪತ್ತನ್ನು ಉಳಿಸಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಧನಾಗಿ ಸೇವೆ ಮಾಡುವುದು ಕೂಡಾ ನಮ್ಮ ಹೆಮ್ಮೆ" ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು. ಸಮಾಜ ವಿಜ್ಞಾನ ಅಧ್ಯಾಪಿಕೆ ಶ್ರೀ ಮತಿ ವಿಚೇತ ಬಿ ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು. ಶ್ರೀ ಶಶಿಕುಮಾರ್ ಪಿ, ಶ್ರೀಮತಿ ಸುನಿತಾ ಕೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲಾಯಿತು.ರಾಜ್ ಕುಮಾರ್, ಪ್ರದೀಪ್, ದಿನೇಶ್ ಕೆ, ಕೇಶವಪ್ರಸಾದ ಎಡಕ್ಕಾನ ಸಹಕರಿಸಿದರು. ಶಿವಪ್ರಸಾದ್ ಸಿ ಕಾರ್ಯಕ್ರಮವನ್ನು ನೇತೃತ್ವ ವಹಿಸಿದರು. ಶಶಿಧರ್ ಕೆ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ವಂದಿಸಿದರು.


ಒಲಿಂಪಿಕ್ ಜ್ಯೋತಿ ಬೆಳಗಿಸುವ ಕಾರ್ಯಕ್ರಮ

ಪ್ಯಾರಿಸ್ ನಲ್ಲಿ ಜರಗುವ ಒಲಿಂಪಿಕ್ಸ್ ಪಂದ್ಯಾಟದ ಅಂಗವಾಗಿ, ಶಾಲಾಮಟ್ಟದಲ್ಲಿ ಕ್ರೀಡಾ ಪ್ರತಿಜ್ಞೆ ಹಾಗೂ ವಿಶೇಷ ಅಸೆಂಬ್ಲಿಯನ್ನು ಹಮ್ಮಿಕೊಳ್ಳಲಾಯಿತು. ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಕ್ರೀಡಾ ಜ್ಯೋತಿ ಬೆಳಗಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಮತ್ತು ದೈಹಿಕ ಶಿಕ್ಷಕ ಶ್ರೀ ಸಂತೋಷ್ ಕುಮಾರ್ ಒಲಿಂಪಿಕ್ಸ್ ಸ್ಪರ್ಧೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.