ಧರ್ಮತ್ತಡ್ಕದಲ್ಲಿ ಮಂಜೇಶ್ವರ ಉಪಜಿಲ್ಲಾ ಕಲೋತ್ಸವಕ್ಕೆ ಸಂಭ್ರಮದ ಚಾಲನೆ

ಧರ್ಮತ್ತಡ್ಕ: ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಕೇರಳ ಶಾಲಾ ಕಲೋತ್ಸವಕ್ಕೆ ಇಂದು ಸಂಭ್ರಮದ ಚಾಲನೆ ದೊರೆಯಿತು. 120 ಶಾಲೆಗಳಿಂದ 4000ಕ್ಕೂ ಅಧಿಕ ವಿದ್ಯಾರ್ಥಿಗಳು 25 ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನಗೈಯಲಿರುವ ಕಲೋತ್ಸವದ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು.

ಶ್ರೀ ದುರ್ಗಾಮೇಶ್ವರಿ ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದ ಅಮ್ಮ ಧ್ವಜಾರೋಹಣವನ್ನು ಗೈದು ಕಲೋತ್ಸವದ ಕಾರ್ಯಕ್ರಮಗಳಿಗೆ ವಿದ್ಯುಕ್ತವಾದ ಚಾಲನೆಯನ್ನಿತ್ತರು. ಶಾಲಾ ಮಕ್ಕಳ ಹುಲಿವೇಷ ಕುಣಿತ, ನಾಸಿಕ್ ಬಾಂಡ್, ಬೊಂಬೆ ವೇಷಗಳೊಂದಿಗಿನ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಅತಿಥಿಗಳನ್ನು ವೇದಿಕೆಯತ್ತ ಆಹ್ವಾನಿಸಲಾಯಿತು. ಧರ್ಮತ್ತಡ್ಕದ ವಿದ್ಯಾಸಂಸ್ಥೆಗಳ ಅಧ್ಯಾಪಕ ವೃಂದದವರು ಸ್ವಾಗತ ಗೀತೆಯನ್ನು ಹಾಡಿ ಗಣ್ಯರನ್ನು ಸ್ವಾಗತಿಸಿದರು.

ವೇದಿಕೆಯಲ್ಲಿ ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವರಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಮಾರಂಭದ ಘನ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ಎಂ.ಎಚ್ ವಹಿಸಿದರು‌. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪಠ್ಯ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಉತ್ಸವವನ್ನು ಕೇರಳ ಸರಕಾರವು ಅತ್ಯಂತ ಸುವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಮಂಜೇಶ್ವರ ಉಪಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿ ಶ್ರೀ ಜಿತೇಂದ್ರ ಎಸ್ ಎಚ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲೋತ್ಸವವು ಕೇವಲ ವಿದ್ಯಾರ್ಥಿಗಳ ಸ್ಪರ್ಧೆಗಳಿಗೆ ಸೀಮಿತವಾಗಿರದೆ ಊರವರ ಸಹಕಾರದಿಂದ ಧರ್ಮತ್ತಡ್ಕದ ಊರಿನ ಉತ್ಸವವಾಗಿ‌ ಬದಲಾಗಿದೆ ಎಂದು ಶ್ಲಾಘಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ನಾರಾಯಣ ನಾಯಕ್, ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಾವತಿ , ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಲಕ್ಷ್ಮಿ ಎನ್, ವಾರ್ಡ್ ಸದಸ್ಯರಾದ ಶ್ರೀಮತಿ ಶಾಂತಿ ವೈ, ಶ್ರೀ ಗಂಗಾಧರ , ಶ್ರೀಮತಿ ಜಯಂತಿ, ಶ್ರೀಮತಿ ಕಾವ್ಯಶ್ರೀ, ಹಿರಿಯ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಮುಂದಾಳು ಕೋಳಾರು ಸತೀಶ್ಚಂದ್ರ ಭಂಡಾರಿ ,ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ವ್ಯವಸ್ಥಾಪಕ ಶಂಕರ ನಾರಾಯಣ ಭಟ್ ಶುಭಾಶಂಸನೆಗೈದರು. ಶ್ರೀ ಆಸಿಫ್ ಅಲಿ ಸಿ.ಎಂ, ಶ್ರೀಮತಿ ಇರ್ಶಾನ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪ ಕಮಲಾಕ್ಷ ಉಪಸ್ಥಿತರಿದ್ದರು.

ಕಲೋತ್ಸವದ ಸಂಚಾಲಕ ಶ್ರೀ ರಾಮಚಂದ್ರ ಭಟ್ ಸ್ವಾಗತಿಸಿ ಸಹ ಸಂಚಾಲಕ ಶ್ರೀ ಇ.ಎಚ್ ಗೋವಿಂದ ಭಟ್ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಏ.ಎಲ್ ಪಿ.ಎಸ್ ಕಂದಲ್ ಮುಖ್ಯೋಪಾಧ್ಯಾಯ ಉಣ್ಣಿಕೃಷ್ಣನ್ ಹಾಗೂ ಧರ್ಮತ್ತಡ್ಕ ಹೈಸ್ಕೂಲ್ ಆಧ್ಯಾಪಕರಾದ ಶಶಿಧರ ಕೆ ಹಾಗೂ ಸೂರ್ಯನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.