Ee Samaya saridu Hoguvudu
ಪ್ರಖ್ಯಾತ್ ಕಣ್ಣೀರು ಹರಿಸುತ್ತಿದ್ದ. ಎಲ್ಲರೂ ಆಶ್ಚರ್ಯಚಕಿತರಾಗಿ ಅವನ ಕಡೆಗೆ ನೋಡಲಾರಂಭಿಸಿದರು. " ಹೇಯ್! ಯಾಕೋ, ಏನಾಯ್ತು? " ರಾಮರಾಯರು ಕೇಳಿದರು. " ಹೇಳಕಾಗಲ್ಲಪ್ಪ! " ಎಂದ ಪ್ರಥಮ್. " ಎಲ್ಲಾ ವಿಷಯ ಹೇಳುವಂಥದ್ದಲ್ಲ. ಕೆಲವನ್ನು ಮುಚ್ಚಿಡಬೇಕಾಗುತ್ತೆ. " ಎಂದನವನು.

" ಆದ್ರೂ! ಪ್ರಖ್ಯಾತ್ ಅಳ್ತಾ ನೆಂದರೆ? ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ದಾನೆಂದೇ ಅರ್ಥ." ಕಮಲಮ್ಮ ಹೇಳಿದರು. " ಅಳುವಂಥದ್ದು ಏನಾಯ್ತು? ಇಲ್ಲಿ ಯಾರೂ ದುಃಖದ ವಿಷಯವನ್ನ ಹೇಳಿಲ್ಲ. ಮತ್ಯಾಕೆ ಅಳಬೇಕು? " ಎಂದು ನಾಗಜ್ಜಿ ಕನ್ನಡಕ ಸರಿಪಡಿಸಿಕೊಂಡರು. ಪ್ರಖ್ಯಾತ್ ಕತ್ತೆತ್ತಿದ. "ವಿಷಯ ಇದ್ದರೇ ಅಳಬೇಕೇ? ಬಹಿರಂಗ ಆಗದ ವಿಷಯಗಳಿದ್ದರೆ ಅದಕ್ಕೆ ಸಂಬಂಧಿಸಿದ ವಿಷಯ ಕೇಳಿದರೆ ಸಾಕು ದುಃಖ ಉಮ್ಮಳಿಸಿ ಕಣ್ಣೀರು ಹರಿಯುತ್ತದೆ." ಎಂದ ಕಣ್ಣೊರೆಸಿಕೊಂಡು. " ಗೊತ್ತು.. ಗೊತ್ತು ಅಣ್ಣಾ! ನಿನ್ನ ಮನಸ್ಸು ನನಗೆ ಗೊತ್ತು..." ಪ್ರಥಮ್ ಮುಂದುವರಿಸುತ್ತಿದ್ದನೇನೋ. ಅವನ ಮಾತನ್ನು ಖಂಡಿಸಿದ "STOP IT" ಎಂಬ ಪ್ರಖ್ಯಾತ್ ನ ಉದ್ಗಾರ ಮನೆಯ ಮೂಲೆ-ಮೂಲೆಗಳಲ್ಲಿ ಅನುರಣಿಸಿತು.

" ನಿನಗೆ ಭಾವನೆಗಳಿಲ್ಲವೇ? ಕಲ್ಲು ಹೃದಯಿಯೇ ನೀನು, ಪ್ರಥಮ್? " ದುಃಖವೋ  ಕ್ರೋಧವೋ  ಗೊತ್ತಿಲ್ಲ, ಅದ್ಯಾವುದೋ ರೋಷ ಪ್ರಖ್ಯಾತ್ ನ ಕಣ್ಣಲ್ಲಿ ಎದ್ದು ಕಾಣುತ್ತಿತ್ತು. "ಇದೆ ಅಣ್ಣಾ.. ಇದೆ" ಪ್ರಥಮ್ ನ  ಕಣ್ಣಿಂದ ಎರಡು ಹನಿ ಕಣ್ಣೀರು ಠಪ್ಪನೇ ನೆಲಕ್ಕೆ ಉದುರಿದವು.
ಇಷ್ಟು ಹೊತ್ತು ಸಹನೆಯಿಂದ ಎಲ್ಲವನ್ನೂ ನೋಡುತ್ತಿದ್ದ ರತ್ನಕ್ಕ ನಿಗೆ ರೇಗಿ ಹೋಯಿತು. " ಇಲ್ಲೇನು ನಡೆಯುತ್ತಿದೆ?  ಹಿರಿಮಗ ಶುರುಮಾಡಿದ ನಾಟಕಕ್ಕೆ ಕಿರಿಮಗ ಮುಕ್ತಾಯ ಹಾಡುತ್ತಿರುವಂತಿದೆ. ಇದೇನು ಮನೆಯೋ, ಇಲ್ಲ ಡ್ರಾಮಾ ಕಂಪೆನಿಯೋ?" ಎಂದುಬಿಟ್ಟರು.

ಈಗ ಪ್ರಖ್ಯಾತ್, " ಮಾ.. ಇಂದು ತಾರೀಕೆಷ್ಟು ಎಂದೆ?" ಎಂದು ಕೇಳಿದ. ಕಮಲಮ್ಮ ತಕ್ಷಣವೇ "ಮೇ 14" ಎಂದರು. ಅಣ್ಣತಮ್ಮಂದಿರು ಬಿಕ್ಕಳಿಸಿದರು. ಪ್ರಖ್ಯಾತ್ ಗೋಡೆಗೆ ಹೊಡೆದ ಆಣಿಯಲ್ಲಿ ತಗಲಾಕಿದ್ದ ಕಾರಿನ ಕೀಯನ್ನು ತೆಗೆದು ( ಎಳೆದು ಎನ್ನುವುದೇ ವಾಸಿ) "ಪ್ರಥೂ! ಬಾ..." ಎಂದ. ಮನೆಯವರ ಮುಖ ಗೊಂದಲದ ಗೂಡಾಗಿ ಹೋಯಿತು. ರಾಮರಾಯರು ತಡಮಾಡದೆ, "ಸವಾರಿ ಎಲ್ಲಿಗೆ?" ಎಂದುಬಿಟ್ಟರು. ಪ್ರಥಮ್ ಒಂದಿಷ್ಟು ಸಮಾಧಾನಪಟ್ಟುಕೊಂಡು ( ಅಥವಾ ಹಾಗೆ ನಟಿಸಿ) ಥೇಟ್ ಡಾ। ರಾಜಕುಮಾರ್ ಶೈಲಿಯಲ್ಲಿ "ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ." ಎಂದು ಅಣ್ಣನ ಕೈ ಹಿಡಿದೆಳೆದು ಹೊರನಡೆದ. ರತ್ನಕ್ಕ, " ಅಣ್ಣ! ನಾವೂ ಹೋಗುವ" ಎಂದರು. "ಹೂಂ!" ಎಂದರು ರಾಮರಾಯರು.

" ಬುರ್ರ್...." ಎಂಬ ಸದ್ದಿನೊಂದಿಗೆ ಧೂಳೆಬ್ಬಿಸುತ್ತಾ ಪ್ರಖ್ಯಾತ್ ನ ಕಾರು ಹೊರಟಿತು.  ಹಿಂದೆಯೇ ಮನೆಯವರನ್ನು ಹೊತ್ತ ರಾಮರಾಯರ ಜೀಪೂ ಹೊರಟಿತು.   ಮುಂದೆ ಕಾರು,  ಹಿಂದೆ ಜೀಪು. 
ಕಾರು ಬಹಳ ವೇಗದಲ್ಲಿದ್ದು ಅದರ ಹಿಂದೆ ಹಿಂದೆ ಹೋಗಲು ರಾಮರಾಯರು ಹರಸಾಹಸ ಪಡುತ್ತಿದ್ದರು. " ಏನ್ರೀ ಇವನು?   ಇಷ್ಟು ಸ್ಪೀಡಾಗಿ ಹೋಗುತ್ತಾನೆ!  ಏನಾದರೂ ಆದರೆ?"  ಎಂದರು ಕಮಲಮ್ಮ ಆತಂಕದಿಂದ.
ತಾಯಿ ಮನದ ತುಮುಲ ಆತಂಕ ನಮ್ಮ ಕಥಾನಾಯಕನಿಗೆಲ್ಲಿ ಗೊತ್ತಾಗಬೇಕು?  ಅವನು ಆಕ್ಸಿಲೇಟರ್ ಅನ್ನು ಸಂಪೂರ್ಣ ಬಲ  ಉಪಯೋಗಿಸಿ ಒತ್ತಿ ಹಿಡಿದಿದ್ದ.   ಸ್ಟಿಯರಿಂಗ್ ಚಕ್ರದಷ್ಟೇ ವೇಗದಲ್ಲಿ ತಿರುಗುತ್ತಿತ್ತು. ಮನೆಯಲ್ಲಿ ದುಃಖವನ್ನು ತಡೆಹಿಡಿದಿದ್ದ ಪ್ರಥಮ್ ಈಗ ಬಿಕ್ಕಳಿಸುತ್ತಿದ್ದ.  ಪ್ರಖ್ಯಾತ್ ನ ದು:ಖ  ಕೋಪಕ್ಕೆ ತಿರುಗಿ ಅದರಿಂದ "ತಾನೆಲ್ಲಿದ್ದೇನೆ?  ಏನು ಮಾಡುತ್ತಿದ್ದೇನೆ? " ಎಂಬ ಪ್ರಜ್ಞೆ ಇಲ್ಲದಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವಷ್ಟರಮಟ್ಟಿಗೆ  ಅವನ ಬುದ್ಧಿ ನಾಶವಾಗಿ ಹೋಗಿತ್ತು. Side seat  ನಲ್ಲಿ ಕುಳಿತಿದ್ದ ಪ್ರಥಮ್ ನಿಗೆ

" ಕ್ರೋಧಾತ್ ಭವತಿ ಸಮ್ಮೋಹ:

ಸಮ್ಮೋಹಾತ್ ಸ್ಮೃತಿ ವಿಭ್ರಮ:।
ಸ್ಮೃತಿ ಭ್ರಂಶಾತ್  ಬುದ್ಧಿ ನಾಶ: 

ಬುದ್ಧಿನಾಶಾತ್ ಪ್ರಣಶ್ಯತಿ ।। "

ಎಂಬ ಭಗವದ್ಗೀತೆಯ ಶ್ಲೋಕ ನೆನಪಾಯಿತು. "ಇವನು ಹೋಗಬೇಕಾದಲ್ಲಿಗೆ  ಕರೆದುಕೊಂಡು ಹೋಗುತ್ತಾನೋ  ಇಲ್ಲಾ ಮೇಲೆ ಕಳಿಸುತ್ತಾನೋ? " ಎಂಬ ಪ್ರಶ್ನೆ ಮನದ ಮೂಲೆಯಲ್ಲೊಮ್ಮೆ  ಮಿಂಚಿ ಮಾಯವಾಯಿತು.  ದೃಢೀಕರಣಕ್ಕಾಗಿ ಅಣ್ಣನ ಕಡೆಗೆ ನೋಡಿದರೆ ಅಣ್ಣ Seatbelt  ಹಾಕಿಲ್ಲ!  "ಬುದ್ಧಿ- ನಾಶವಾಗಿ ಹೋಗಿದೆ. ಅದರೊಂದಿಗೆ ತಾನೂ ನಾಶವಾಗುವ plan  ಹಾಕಿದ್ದಾನಾ ಹೇಗೆ? "  ಎಂದು ತನಗೆ ತಾನೇ ಹೇಳಿಕೊಂಡ. " ಅಣ್ಣಾ! Seatbelt is must.  ಸೀಟ್ ಬೆಲ್ಟ್  ಹಾಕಲೇಬೇಕು. ಇದು ಕಡ್ಡಾಯ"  ಎಂದ.  ಡ್ರೈವ್ ಮಾಡುತ್ತಲೇ ಪ್ರಖ್ಯಾತ್ ಸೀಟ್ ಬೆಲ್ಟ್ ಹಾಕಿಕೊಂಡ.

ಅಷ್ಟರಲ್ಲಿ ಹಿಂದೆ ಹಿಂದೆ ಬರುತ್ತಿರುವ ಜೀಪಿನಲ್ಲಿ ಕುಳಿತು ರಾಮರಾಯರು, "ಇವರ ಕಾರು ನೆಲದಲ್ಲಿ ಓಡುವುದೋ, ಗಾಳಿಯಲ್ಲಿ ಹಾರುವುದೋ? ಚಕ್ರಕ್ಕೆ ರೆಕ್ಕೆ ಕಟ್ಟಿದ್ದಾರೆಯೇ?" ಎಂದುಕೊಂಡರು. "ಕೀಂ...." ಎಂಬ ಸದ್ದಿನೊಂದಿಗೆ ಪ್ರಖ್ಯಾತನ ಕಾರು ಬಂಗಲೆಯೊಂದರ ಎದುರು ನಿಂತಿತು. ಅಣ್ಣತಮ್ಮಂದಿರು ಇಳಿದರು. ಜೀಪಿನಲ್ಲಿದ್ದವರು ಮುಂದೇನಾಗುವುದೋ ಎಂದು ಕಾತರದಿಂದ ಕಾಯುತ್ತಿದ್ದರು. ಅಣ್ಣ ತಮ್ಮ ಇಬ್ಬರೂ ಬಾಗಿಲು ತೆಗೆದು ಒಳಗೆ ಹೋದರು. ಒಳಗೆ ಮೇಜಿನ ಮೇಲೆ ಕೆಲವು ಫೋಟೋಗಳು ಒಡೆದುಹೋದ ಸ್ಥಿತಿಯಲ್ಲಿದ್ದವು. ಪ್ರಖ್ಯಾತ್ ಕಂಬನಿ ತುಂಬಿ ಉದ್ಗರಿಸಿದ, " ಸೂರ್ಯಾ! Happy Birthday!!!"

             ಸೋಫಾ ಮೇಲಿಟ್ಟಿದ್ದ ಸುಂದರವಾದ ಟೆಡ್ಡಿಯೊಂದು  ಅವರ ಭಾವನೆಗಳಿಗೆ ಸಾಥ್ ಕೊಟ್ಟಂತೆ  ಅವರಿಗೆ ಭಾಸವಾಯಿತು. 
                 *******
          * ಫ್ಲಾಷ್ ಬ್ಯಾಕ್-1*
         
           " ಸೂರ್ಯ! ಚಾನೆಲ್  ಬದಲಾಯಿಸೋ.." "ಯಾಕೆ ಪ್ರಥೂ?" "ಅಪ್ಪಾ ಮಹಾರಾಜ!  ಚಾನಲ್ ಚೇಂಜ್ ಮಾಡಪ್ಪ"  ಎಂದ ಪ್ರಖ್ಯಾತ್  ಕಿಚಾಯಿಸುವ  ದನಿಯಲ್ಲಿ. " ಚಂಡ ಮುಂಡರ ಆಜ್ಞೆಯಂತೆಯೇ ಆಗಲಿ.." ಎಂದ ಸೂರ್ಯ ಕಿಚಾಯಿಸುತ್ತಾ..  ಆ ಮಾತಿಗೆ ನಗುವೇ ಉತ್ತರವಾಗಿತ್ತು.
                    *******
          ಹಿಂದಿನ ದಿನಗಳನ್ನು ನೆನಪಿಸಿಕೊಂಡ ಪ್ರಥಮ್ ನ  ಕಣ್ಣಲ್ಲಿ ನೀರು ತುಂಬಿತು.

" ಹಿಂದಿನ ಸಿಹಿ ನೆನಪುಗಳು! ಸೂರ್ಯ ಬದುಕಿದ್ದಿದ್ದರೆ ಅದು ಸಿಹಿಯಾಗಿರುತ್ತಿತ್ತು. ಆದರೆ ಅದೇ ಈಗ ದುಃಖ ಕೊಡುತ್ತಿದೆ." ತನ್ನಷ್ಟಕ್ಕೆ ಆದರೂ ಅಣ್ಣನಿಗೆ ಕೇಳಿಸುವಂತೆ ಹೇಳಿದ.

                    *******       
          * ಫ್ಲಾಷ್ ಬ್ಯಾಕ್-2*
       
            "ರಾಹು-ಕೇತುಗಳಿಗೆ ಸ್ವಾಗತ"  ಎಂದಿದ್ದ  ಸೂರ್ಯನ ಮಾತಿಗೆ ಕೋಪಗೊಂಡು " ಗುದ್ಬಿಡ್ತೀನಿ ನೋಡು..  ಯಾಕೋ ಸೂರ್ಯ,  ಯಾವಾಗಲೂ  ರಾಹು-ಕೇತು, ಚಂಡ-ಮುಂಡ, 

ವಾಲಿ-ಸುಗ್ರೀವ ಅಂತಾನೆ ಹೇಳ್ತೀಯಾ? ರಾಮಲಕ್ಷ್ಮಣರು, ಕೃಷ್ಣ ಬಲರಾಮರು, ಕೂಡ ಅಣ್ಣ-ತಮ್ಮಂದಿರೇ ಕಣೋ! " ಎಂದಿದ್ದ ಪ್ರಖ್ಯಾತ್.

         "ಅದೆಲ್ಲಾ ಬಿಡು...ಹ್ಯಾಪಿ ಬರ್ತ್ಡೇ ಸೂರ್ಯಾ!" ಎಂದು  ಪ್ರಖ್ಯಾತ್ ಮತ್ತು ಪ್ರಥಮ್  ಏಕಕಾಲಕ್ಕೆ ಮಾಡಿದ ಶುಭಹಾರೈಕೆ ಯಿಂದಲೇ ಸೂರ್ಯನಿಗೆ, 'ಇಂದು 

ಮೇ 14, ತನ್ನ ಜನ್ಮ ದಿನ' ಎಂಬುದು ನೆನಪಾಗಿದ್ದು.

             " ಓ!  ಥ್ಯಾಂಕ್ಯು! "  ಎಂದು ಗೆಳೆಯರನ್ನು ತಬ್ಬಿಕೊಂಡ ಸೂರ್ಯ. ಆಗ ಇಬ್ಬರೂ ಸೇರಿ ಚಂದದ ಟೆಡ್ಡಿ ಒಂದನ್ನು ಉಡುಗೊರೆಯಾಗಿ ಕೊಟ್ಟರು.  ಅದರ ಮೇಲೆ 

"ಬೆಸ್ಟ್ ಫ್ರೆಂಡ್ಸ್ ಫಾರೆವರ್" " ಲೈಫ್ ಲಾಂಗ್ ಫ್ರೆಂಡ್ಶಿಪ್"

ಎಂಬ ಬರಹ ಇತ್ತು......
                    *******   
         "ಲೈಫ್ ಲಾಂಗ್- ಫೋರೆವರ್" ಎಂಬ ಪದಗಳು ಅಣಕಿಸುತ್ತಿರುವಂತೆ ಪ್ರಖ್ಯಾತ್ ನಿಗೆ ಭಾಸವಾಯಿತು.  ಗೋಡೆಯ ಮೇಲಿಟ್ಟಿದ್ದ ಸೂರ್ಯನ ಭಾವಚಿತ್ರವನ್ನು ತೆಗೆದು ಮೇಜಿನ ಮೇಲೆ ಇಟ್ಟರು. ಅದಕ್ಕೆ ಜೊತೆಯಲ್ಲಿ ತಂದಿದ್ದ ಹೂವಿನ ಹಾರವನ್ನು ಹಾಕಿ ಕಣ್ಣೀರಿನೊಂದಿಗೆ ಅದರ ಎದುರು ಹೂವಿನ ಬೊಕೆ ಇಟ್ಟರು. 

"ಸೂರ್ಯಾ!" ಎಂಬ ಕೂಗಿನೊಂದಿಗೆ ಗಳಗಳನೆ ಅತ್ತು ಬಿಟ್ಟ ಪ್ರಥಮ್.

            ಇತ್ತ  ಬಾಗಿಲು ತೆರೆದಿದ್ದಿದ್ದರಿಂದ ಜೀಪಿನಲ್ಲಿ ಕುಳಿತಿದ್ದವರಿಗೆ ಒಳಗೇನು ನಡೆಯುತ್ತಿದೆ ಎಂದು ಕಾಣುತ್ತಿತ್ತು. ವಿಷಯ ಏನೆಂದು ಅರ್ಥವಾಗುತ್ತಿದ್ದಂತೆ ಎಲ್ಲರೂ ಅಶ್ರುಪೂರ್ಣರಾಗಿದ್ದರು.
           "ಅವನು ಅಲ್ಲಿಗೆ ಹೋಗಿರದಿದ್ದಿದ್ದರೆ...." ಎಂಬ  ಪ್ರಥಮ್ ನ ಮಾತು ಮುಗಿಯುತ್ತಲೇ ಅಲ್ಲಿಗೆ ಇನ್ನೊಬ್ಬನ ಪ್ರವೇಶವಾಯಿತು.  ಅಣ್ಣ-ತಮ್ಮ ಇಬ್ಬರೂ  ಥಟ್ಟನೆ ಆ ವ್ಯಕ್ತಿಯನ್ನು ಹಿಡಿದುಬಿಟ್ಟರು.  ಆ ವ್ಯಕ್ತಿಗೆ ಏನಾಗುತ್ತಿದೆ ಎಂಬುದು ಅರಿಯುವ ಮೊದಲೇ ಹಿಡಿದೆಳೆದು ಕಾರಿನಲ್ಲಿ ಕುಳ್ಳಿರಿಸಿದರು.
               ಈ ಕಡೆಯಲ್ಲಿ ನಡೆಯುತ್ತಿರುವುದೇನೆಂದು ಅರ್ಥವಾದ ಮೇಲೆ ಕಾರನ್ನು ಹಿಂಬಾಲಿಸುವುದು ಬೇಡ ಎನಿಸಿತು ರಾಮರಾಯರಿಗೆ.  ಜೀಪನ್ನು ಮನೆಕಡೆ ತಿರುಗಿಸಿದರು.
          ಇಷ್ಟು ಹೊತ್ತು ದುಃಖಿತರಾಗಿದ್ದ ಪ್ರಖ್ಯಾತ್ ಮತ್ತು ಪ್ರಥಮ್ ಈಗ ಸಿಟ್ಟಿಗೆದ್ದಿದ್ದರು. " ಎರಡು ವರ್ಷ ತಲೆ ಮರೆಸಿಕೊಂಡರೆ  ಬಿಟ್ಟೇವೇ?  ನಮ್ಮ ಸೂರ್ಯನಿಗೆ ಕೊಟ್ಟ ಮಾತು ನೆರವೇರಿಸುವವರೆಗೂ ನಮಗೆ ಸಮಾಧಾನವಿಲ್ಲ." ಪ್ರಥಮ್ ಹೇಳಿದ.
             ಚಿಕ್ಕವನಾದ  ತಮ್ಮನೇ ಅಷ್ಟು ಮಾತನಾಡಿದಾಗ ಅಣ್ಣನಾಗಿ ಸುಮ್ಮನಿರಲು ಸಾಧ್ಯವೇ?  "ಸೂರ್ಯನ ಆಸ್ತಿ ವಶಪಡಿಸಿ ಹದಿನಾಲ್ಕು ಲೋಕದಲ್ಲಿಯೂ ಸಿಗದ  ಸಂತೋಷವನ್ನು ಅನುಭವಿಸುವ ಲೆಕ್ಕಾಚಾರ ಹಾಕಿದರೆ ಆಯಿತೇ?  ಈಗ ಬಾ ಸ್ಟೇಷನ್ನಿಗೆ. ಹದಿನಾಲ್ಕು ಲೋಕ ಕಣ್ಣೆದುರು ಗಿರಗಿರನೆ ಸುತ್ತಬೇಕು. ಇದೆ ನಿನಗೆ ನರಕದರ್ಶನ." ಎಂದ ಪ್ರಖ್ಯಾತ್.  
         ಪ್ರಥಮ್ ಮುಂದುವರಿಸಿದ, 

"ಅಂದು ಸೂರ್ಯನ ಚಿತೆ ಮುಂದೆ, 'ನಿನಗಾದ ಅನ್ಯಾಯವನ್ನು ಸರಿಪಡಿಸುತ್ತೇವೆ' ಎಂದು ಭಾಷೆ ಕೊಟ್ಟಿದ್ದೆವು. ಕೆಟ್ಟ ಮನಸ್ಸಿನ ಹಾರಾಟಕ್ಕೆ ಮಾತ್ರ ಕಾಲ ಬರುವುದಿಲ್ಲ. ಒಳ್ಳೆ ಮನಸ್ಸಿನ ಗೆಲುವಿಗೂ ಕಾಲ ಇದೆ. ಜಗತ್! ಇನ್ನೊಬ್ಬರ ಸಮಾಧಿಯ ಮೇಲೆ ಕಟ್ಟಿದ ಸೌಧದಲ್ಲಿ ಸಮಾಧಾನ ಇರೋದಿಲ್ಲ. ಕೇವಲ ಸ್ಮಶಾನಮೌನ ಇರುತ್ತೆ. ನೆನಪಿಟ್ಟುಕೋ..! "

        ಇಷ್ಟು ಮಾತನಾಡಿ ಅವರಿಬ್ಬರು ಸುಮ್ಮನಾದರು. ಎರಡು ವರ್ಷಗಳ ಹಿಂದೆ ಸೂರ್ಯನ ಮರಣದ ದಿನ ನೆನಪಾಯಿತು ಪ್ರಥಮ್ ನಿಗೆ.
                   *******
           "ಪ್ರಥಮ್!  ನಾನಿಂದು ನನ್ನ ದಾಯಾದಿ ಜಗತ್ ನ ಮನೆಗೆ ಹೋಗಿದ್ದೆ. You know... ಅವನಿಗೆ ನನ್ನ ಮೇಲೆ ವೈರ ಇದೆ. ಆದರೆ ಅವನು ಈ ರೀತಿ ಅದನ್ನು ತೀರಿಸಿಕೊಳ್ಳುತ್ತಾನೆ ಎಂದು ನಾನು ಭಾವಿಸಿರಲಿಲ್ಲ.  ನಿನಗೆ ಗೊತ್ತು.. ಅವನು  ನನ್ನಲ್ಲಿರುವ ಸಂಪತ್ತಿಗಾಗಿ ಆಸೆ ಪಡುತ್ತಿದ್ದಾನೆ. ಅದನ್ನು ತೀರಿಸಿಕೊಳ್ಳುವುದಕ್ಕಾಗಿ, ತಿನ್ನುವ ಅನ್ನದಲ್ಲಿ ವಿಷ ಬೆರೆಸಿ  ತಿನ್ನಿಸಿದ್ದಾನೆ."
           ಈ ಮಾತುಗಳನ್ನು ಕೇಳಿ  ಆತಂಕಿತರಾದ ಪ್ರಖ್ಯಾತ್ ಮತ್ತು ಪ್ರಥಮ್  ಶೀಘ್ರವಾಗಿ  ಸೂರ್ಯನ ಮನೆಗೆ ಹೋದರು. ಆದರೆ ಕಾಲ ಮಿಂಚಿ ಹೋಗಿತ್ತು........  
          ಜಗತ್ ತಲೆಮರೆಸಿಕೊಂಡಿದ್ದ. ದೂರು ಕೊಟ್ಟರು ಪ್ರಯೋಜನವಾಗಿರಲಿಲ್ಲ. 

"ಅವನು ಸಿಗಲಿ ಆಮೇಲೆ ನೋಡೋಣ" ಎಂದು ಹುಡುಕಾಟ ಪ್ರಾರಂಭಿಸಿದ್ದರು ಪೋಲೀಸರು. ಆದರೆ ಅವನು ಸಿಕ್ಕಿರಲಿಲ್ಲ.

                  *******
          " ಛೆ! ಇಲ್ಲಿಗೆ ಬರಬಾರದಿತ್ತು.." ಮನಸ್ಸಿನಲ್ಲೇ ಎಂದುಕೊಂಡ ಜಗತ್.  ಆದರೆ  ತಲೆ ತಾಗಿದ ಮೇಲೆ ಬುದ್ಧಿ ಬಂದು ಪ್ರಯೋಜನವಿದೆಯೇ?  ಅವನು  ಪೊಲೀಸರ ಅತಿಥಿಯಾದ. ವಿಚಾರಣೆ ಮುಗಿದು ಜಗತ್ ನಿಂದ ಕಿತ್ತುಕೊಳ್ಳಲ್ಪಟ್ಟ ಸೂರ್ಯನ ಸಂಪತ್ತು ಸೂರ್ಯನ ಮನೆಯವರಿಗೆ ವಾಪಾಸಾಯಿತು. ಒಬ್ಬ ವ್ಯಕ್ತಿಯ ಮರಣಕ್ಕೆ ಕಾರಣನಾದುದರಿಂದ ಜಗತ್ ನಿಗೆ ಕಠಿಣ ಶಿಕ್ಷೆ  ಜಾರಿಯಾಯಿತು.
         ಪ್ರಖ್ಯಾತ್ ನಿಗೆ ಪ್ರಥಮ್ ಹೇಳಿದ, " ಅಣ್ಣಾ!  ಅಂದು ನಾವು ಸೂರ್ಯನ ಚಿತೆಯ ಎದುರು ನಿಂತು  ದುಃಖಿಸುತ್ತಿದ್ದಾಗ  ನನ್ನ ಮನಸ್ಸಿನಲ್ಲಿ ಬಂದ ಮಾತೊಂದು ಈಗ ನಿಜವಾಯಿತು" ಎಂದು. ಪ್ರಖ್ಯಾತ್ ಪ್ರಶ್ನಿಸಿದ, "ಯಾವ ಮಾತದು,ಪ್ರಥೂ?"  ಪ್ರಥಮ್ ಉತ್ತರಿಸಿದ. 
  • "ಈ ಸಮಯ ಸರಿದು ಹೋಗುವುದು"*



ABHIJNA.B
8 A എസ് .എ. പി. എച്ച് . എസ് . അഗൽപാടി
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കഥ